ಚೀನೀ ಯಾತ್ರಿಕರು (ಭಾರತದಲ್ಲಿ)

	ಬೌದ್ಧ ಯಾತ್ರಾಸ್ಥಳಗಳನ್ನು ಸಂದರ್ಶಿಸಿ ಬುದ್ಧನಿಗೆ ಸಂಬಂಧಿಸಿದ ಪಳೆಯುಳಿಕೆಗಳನ್ನೂ ಬೌದ್ಧ ಗ್ರಂಥಗಳನ್ನೂ ಸಂಗ್ರಹಿಸಿ ತಮ್ಮ ದೇಶಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಭಾರತಕ್ಕೆ ಭೇಟಿ ಕೊಟ್ಟ ಚೀನೀ ಬೌದ್ಧರು. ಕ್ರಿ.ಶ. 5, 6, 7 ಮತ್ತು 8ನೆಯ ಶತಮಾನಗಳಲ್ಲಿ ಭಾರತಕ್ಕೆ ಭೇಟಿ ಕೊಟ್ಟ ಚೀನೀ ಯಾತ್ರಿಕರಲ್ಲಿ ಕನಿಷ್ಠ ಪಕ್ಷ 162 ಮಂದಿ ಯಾತ್ರಿಕರಾದರೂ ತಮ್ಮ ಪ್ರವಾಸಗಳನ್ನು ಕುರಿತ ಪ್ರಾಮಾಣಿಕ ದಾಖಲೆಗಳನ್ನೂ ಭಾರತೀಯ ಜೀವನದ ಸಮಸ್ತ ಅಂಶಗಳ ಬಗ್ಗೆ ಅಮೂಲ್ಯ ಪ್ರತ್ಯಕ್ಷದರ್ಶಿ ವರದಿಗಳನ್ನೂ ಬಿಟ್ಟು ಹೋಗಿದ್ದಾರೆ. ಈ ವರದಿಗಳ ಬೆಳಕಿನಲ್ಲಿ ಭಾರತೀಯ ಜನಜೀವನದ ಚಿತ್ರವನ್ನು ಪುನರ್‍ರಚಿಸುವುದು ಹಾಗೂ ಅದಕ್ಕೆ ಮತ್ತೆ ಬೆಲೆಕಟ್ಟುವುದು ಸಾಧ್ಯವಾಗಿರುವುದು ಮಾತ್ರವಲ್ಲ, ಅಗತ್ಯವೂ ಆಗಿದೆ.

	ಅಶೋಕನ ಕಾಲದಲ್ಲಿ ಭಾರತದಲ್ಲಿ ಹರಡಿದ್ದ ಬೌದ್ಧಮತ, ಚೀನದಲ್ಲಿ ಉತ್ತರ ಹಾನ್ ವಂಶದ ಚಕ್ರವರ್ತಿ ಮಿಂಗನ (58-75) ಆಡಳಿತದ ಅವಧಿಯಲ್ಲಿ ಚೀನದಲ್ಲೂ ಪ್ರಚಾರಕ್ಕೆ ಬಂತು. ಮಧ್ಯ ಏಷ್ಯದ ರಾಷ್ಟ್ರಗಳ ಹಾಗೂ ಸಮುದ್ರ ಮಾರ್ಗಗಳ ಮೂಲಕ ಪ್ರವರ್ಧಮಾನವಾಗಿದ್ದ ಭಾರತ-ಚೀನ ವ್ಯಾಪಾರ ಸಂಪರ್ಕಗಳಿಂದಾಗಿ ಬುದ್ಧನ ಉಪದೇಶಗಳ ಪ್ರಸಾರಕ್ಕೆ ಅನುಕೂಲ ಒದಗಿ ಬಂತು. ಎರಡು, ಮೂರು ಮತ್ತು ನಾಲ್ಕನೆಯ ಶತಮಾನಗಳಲ್ಲಿ ಅನೇಕ ಭಾರತೀಯ ಭಿಕ್ಷುಗಳು ಅಪಾರ ಕಷ್ಟ ಸಂಕಟಗಳನ್ನು ಎದುರಿಸಿ ಚೀನಕ್ಕೆ ಪ್ರಯಾಣ ಮಾಡಿದರು. ತಮ್ಮ ಜೀವನದ ಬಹುಭಾಗವನ್ನು ಬೌದ್ಧ ಧರ್ಮಗ್ರಂಥಗಳ ಭಾಷಾಂತರಕ್ಕಾಗಿ ಮೀಸಲಾಗಿಟ್ಟರು. ಭಾರತ ಮತ್ತು ಇತರ ದೇಶಗಳಲ್ಲಿ ತಾವು ಕೈಗೊಂಡ ಪ್ರವಾಸಗಳ ಬಗ್ಗೆ ಐತಿಹಾಸಿಕ ದಾಖಲೆಗಳನ್ನು ಬಿಟ್ಟುಹೋಗಿರುವ ಚೀನೀ ಯಾತ್ರಿಕರಲ್ಲಿ ಮೊದಲಿಗನಾದ ಫಾಹಿಯೆನ್ನನ ಕಾಲಕ್ಕೆ ಮೊದಲೇ ಕನಿಷ್ಠ ಪಕ್ಷ ಇಪ್ಪತ್ತೈದು ಮಂದಿ ಭಾರತೀಯ ಭಿಕ್ಷುಗಳು ಈ ಕಾರ್ಯದಲ್ಲಿ ನಿರತರಾಗಿದ್ದರು. ಕುಮಾರಜೀವನೆಂಬ ಪ್ರಸಿದ್ಧ ಭಾರತೀಯ ಭಿಕ್ಷು (344-413) ಚಾಂಗನ್ ಎಂಬಲ್ಲಿ 800 ಮಂದಿ ಪ್ರಸಿದ್ಧ ವಿದ್ವಾಂಸ ಭಿಕ್ಷುಗಳನ್ನೊಳಗೊಂಡಿದ್ದ ಭಾಷಾಂತರ ವಿಭಾಗವೊಂದನ್ನು ಸಂಘಟಿಸಿದ್ದ ; 300 ಕ್ಕೂ ಹೆಚ್ಚು ಸಂಪುಟಗಳನ್ನು ಸಿದ್ಧಪಡಿಸಿದ.

	ಚೀನವನ್ನು ತಲುಪಿದ ಪ್ರಾಚೀನ ಬೌದ್ಧ ಧರ್ಮಗ್ರಂಥಗಳಲ್ಲಿ ಬಹುಪಾಲಿನವು ಮಧ್ಯ ಏಷ್ಯದ ರಾಜ್ಯಗಳಿಂದ ಬಂದವು. ಚೀನದಲ್ಲಿ ಬೌದ್ಧ ಧರ್ಮದ ಪ್ರಾಚುರ್ಯ ಹೆಚ್ಚುತ್ತ ಬಂದಂತೆ ಭಿಕ್ಷುಗಳಿಂದಲೂ ಚೀನೀ ರಾಜರಿಂದಲೂ ಹೆಚ್ಚಿನ ಹಾಗೂ ಮತ್ತಷ್ಟು ಪ್ರಾಮಾಣಿಕವಾದ ಶಾಸ್ತ್ರಗ್ರಂಥಗಳಿಗೆ ತುರ್ತಿನ ಬೇಡಿಕೆಯುಂಟಾಯಿತು. ಇದು ಸಾಹಸಶೀಲರಾದ ಚೀನೀ ಭಿಕ್ಷುಗಳ ಪ್ರಸಿದ್ಧ ಯಾತ್ರೆಗಳ ಪ್ರವಾಹಕ್ಕೆ ಕಾರಣವಾಯಿತು. ಇವರು ಮರಳುಗಾಡನ್ನೂ ಬೆಟ್ಟಗುಡ್ಡಗಳನ್ನೂ ದಾಟಿ ಸಾವಿರಾರು ಮೈಲಿಗಳ ಪ್ರಯಾಣವನ್ನು ಕೈಗೊಳ್ಳಬೇಕಾಗಿತ್ತು. ಆಧ್ಯಾತ್ಮಕ ಲಾಭದ ಜೊತೆಗೆ, ಪ್ರಮಾಣಬದ್ದ ಶಾಸ್ತ್ರಗಂಥಗಳನ್ನು ಸಂಪಾದಿಸುವುದೂ ಮತ್ತು ಬೌದ್ಧ ಸಂಪ್ರದಾಯ ಹಾಗೂ ಆಚಾರವಿಚಾರಗಳ ಪ್ರತ್ಯಕ್ಷ ಪರಿಚಯ ಪಡೆದುಕೊಳ್ಳುವುದೂ ದೇಶೀಯ ಟೌ ಪಂಥದ ನಂಬಿಕೆಗಳಿಂದಲೂ ನಡವಳಿಕೆಗಳಿಂದಲೂ ಅತಿಯಾಗಿ ಕಲುಷಿತವಾಗಿದ್ದ ಚೀನೀ ಬೌದ್ಧ ಧರ್ಮವನ್ನು ಶುದ್ಧೀಕರಿಸುವುದೂ ಅದರಲ್ಲಿ ಸುಧಾರಣೆಗಳನ್ನುಂಟು ಮಾಡುವುದೂ ಇವರ ಧ್ಯೇಯವಾಗಿತ್ತು.

	ಭಾರತದಲ್ಲಿಯ ತನ್ನ ಪ್ರವಾಸದ ವಿವರಗಳನ್ನು ಬರೆದಿಟ್ಟಿರುವ ಮೊದಲ ಚೀನೀ ಯಾತ್ರಿಕನೆಂದರೆ ಚಿ-ಟೌ-ಅನ್. ನಾಲ್ಕನೆಯ ಶತಮಾನದ ಆರಂಭದ ಅವಧಿಯಲ್ಲಿ, ಎಂದರೆ ಫಾಹಿಯೆನ್ ಭಾರತಕ್ಕೆ ಆಗಮಿಸುವುದಕ್ಕಿಂತ ಸುಮಾರು 80 ವರ್ಷ ಹಿಂದೆ_ ಈತ ಭಾರತಪ್ರವಾಸ ಮಾಡಿದ. ಪಾಶ್ಚಾತ್ಯ ರಾಷ್ಟ್ರಗಳ (ಭಾರತ) ವಿವರಣೆ ಎಂಬ ಪುಸ್ತಕವನ್ನು ಈತ ರಚಿಸಿದ್ದುದಾಗಿ ತಿಳಿದುಬಂದಿದೆ. ಈ ಪುಸ್ತಕ ಬಹುಶಃ ನಷ್ಟವಾಗಿದೆ. ಚೀನೀ ವಿಶ್ವಕೋಶಗಳಲ್ಲೂ ಜೀವನ ಚರಿತೆಗಳಲ್ಲೂ ಲಭ್ಯವಿರುವ ಇದರ ಸಂಕ್ಷಿಪ್ತ ಉಲ್ಲೇಖಗಳಿಂದ ಇದರ ಸ್ವರೂಪವನ್ನು ಊಹಿಸಬಹುದಾಗಿದೆ. ಚಿ-ಟೌ-ಅನ್ ಅನಂತರ ಬಂದವನು ಫಾಹಿಯೆನ್. ಈತನ ಫೋಎ ಕೊಉಎ ಕಿ) ಬೌದ್ಧ ರಾಷ್ಟ್ರಗಳನ್ನು ಕುರಿತ ದಾಖಲೆಗಳು) ಎಂಬ ಪ್ರಸಿದ್ಧ ಗ್ರಂಥ ಎಂದು ಉಪಲಬ್ಧವಿರುವ ಈ ಬಗೆಯ ದಾಖಲೆಗಳಲ್ಲಿ ಅತ್ಯಂತ ಪ್ರಾಚೀನವಾದ್ದು. ಫಾಹಿಯೆನ್ ಮೂವತ್ತು ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದ ; 399-414 ರಲ್ಲಿ ಭಾರತದಲ್ಲಿದ್ದ ಫಾಹಿಯೆನ್‍ನ ಅನಂತರ ಸುಮಾರು 100 ವರ್ಷಗಳ ತರುವಾಯ ಹೊಎಇ-ಸೊಂಗ್ ಮತ್ತು ಸುಂಗ್-ಯುನ್ ಎಂಬ ಇಬ್ಬರು ಯಾತ್ರಿಕರು ಸಾಮ್ರಾಜ್ಞಿಯೊಬ್ಬಳ ಸೂಚನೆಯ ಮೇರೆಗೆ ಭಾರತಕ್ಕೆ ಭೇಟಿ ಕೊಟ್ಟಿದ್ದರು. ಅವರು ತಮ್ಮ ಪ್ರವಾಸದ ನೆನಪುಗಳನ್ನು ಕುರಿತ ಪುಸ್ತಕ ಬರೆದಿದ್ದಾರೆ. ಈ ಭಿಕ್ಷುಗಳ ಸಂಚಾರ ಬಹುಮಟ್ಟಿಗೆ ಉತ್ತರಭಾರತಕ್ಕೆ ಸೀಮತವಾಗಿತ್ತು. ಉದಯನನ ಸಾಮ್ರಾಜ್ಯದಲ್ಲಿ ( ಇಂದಿನ ಲದ್ದಾಖ್) ಇವರು ಎರಡು ವರ್ಷ ಕಳೆದರು. 629-646 ರಲ್ಲಿ ಯುವಾನ್-ಚ್ವಾಂಗ್ ಐತಿಹಾಸಿಕ ಯಾತ್ರೆಯೊಂದನ್ನು ಕೈಗೊಂಡ. ಸಿ-ಯು-ಕಿ (ಪಾಶ್ಚಾತ್ಯ ರಾಷ್ಟ್ರಗಳನ್ನು ಕುರಿತ ವೃತ್ತಾಂತಗಳು) ಎಂಬ ಪ್ರಸಿದ್ಧ ಕೃತಿಯನ್ನು ಈತ ರಚಿಸಿದ್ದಾನೆ. ಇದು ಫಾಹಿಯೆನನ ಕೃತಿಯ ಸುಮಾರು 10-12ರಷ್ಟು ವಿಸ್ತಾರವಾಗಿದೆಯೆಂದು ಹೇಳಲಾಗಿದೆ. ವೈಜ್ಞಾನಿಕ ನಿಷ್ಕøಷ್ಟತೆ ಹಾಗೂ ವೈವಿಧ್ಯ ದೃಷ್ಟಿಯಿಂದ ಈ ಕೃತಿ ಈ ಬಗೆಯ ದಾಖಲೆಗಳಲ್ಲೇ ಅತ್ಯಂತ ಬೋಧಪ್ರದವಾದ್ದು.

	ಸುಮಾರು ಇಪ್ಪತ್ತಾರು ವರ್ಷಗಳ ತರುವಾಯ-671ರಲ್ಲಿ-ಇತ್ಸಿಂಗ್ ಎಂಬ ಮತ್ತೊಬ್ಬ ಸಾಹಸಿ ಭಿಕ್ಷು ಭಾರತಯಾತ್ರೆ ಕೈಗೊಂಡ. ಈತ ಸಮುದ್ರ ಮಾರ್ಗವಾಗಿ ಬಂದು ಆ ಮಾರ್ಗವಾಗಿಯೇ ತೆರಳಿದ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬೌದ್ಧ ಧರ್ಮದ ಅನ್ವೇಷಣೆಗಾಗಿ ಹೊರಟ ಪ್ರಸಿದ್ಧ ಭಿಕ್ಷುಗಳ ವೃತ್ತಾಂತಗಳನ್ನು ಹಾಗೂ ಭಾರತ ಮತ್ತು ಮಲಯ ದ್ವೀಪಸ್ತೋಮದಲ್ಲಿ ಪ್ರಚುರವಾಗಿರುವ ಬೌದ್ಧಧರ್ಮವನ್ನು ಕುರಿತ ಎರಡು ಕೃತಿಗಳನ್ನು ಈತ ಬಿಟ್ಟು ಹೋಗಿದ್ದಾನೆ. ಇವು ಸ್ವಾರಸ್ಯ ಪೂರ್ಣವಾದವು. ಇತರ ಕೃತಿಗಳಿಗಿಂತ ಚಿಕ್ಕವು. ಕೊನೆಯದಾಗಿ ದೊರಕುವ ಪ್ರವಾಸಕಥನವೆಂದರೆ ಖಿ-ನಿಯೆ ಎಂಬುವನದು. ಇವನು ಸಮ್ರಾಟನ ಸೂಚನೆಯ ಮೇರೆಗೆ ನಿಯೋಗವೊಂದರ ನಾಯಕನಾಗಿ 964ರಲ್ಲಿ ಚೀನದಿಂದ ಹೊರಟ. ಇವನ ಸಂಗ್ರಹ ಲೇಖಗಳು ವ್ಯಾಖ್ಯಾನ ಗ್ರಂಥವೊಂದರಲ್ಲಿ ಉಪಲಬ್ಧವಾಗಿವೆ.

	ಈ ಭಿಕ್ಷು-ಯಾತ್ರಿಕರೇ ಅಲ್ಲದೆ ಸೇನಾಧಿಕಾರಿಗಳ ಹಾಗೂ ಸಾಮ್ರಾಜ್ಯಾಧಿಕಾರಿಗಳ ನಿಯೋಗಗಳೂ ಪ್ರವಾಸ ಕೈಗೊಂಡಿದ್ದುವು. ಆ ನಿಯೋಗಿಗಳೂ ಹಿಂದಿರುಗುವಾಗ ತಮ್ಮೊಂದಿಗೆ ಉಪಯುಕ್ತ ದಾಖಲೆಗಳನ್ನು ಚೀನಕ್ಕೆ ತಂದರು.

	ಆರೇಳು ಶತಮಾನಗಳ ಅವಧಿಯಲ್ಲಿ ಭಾರತದಿಂದ ತೆಗೆದುಕೊಂಡು ಬಂದ ಕೃತಿಗಳ ಸಂಖ್ಯೆ ಎಷ್ಟು ಹೆಚ್ಚಿತೆಂದರೆ, ಅವುಗಳ ಸೂಚಿಗಳನ್ನು ಸಿದ್ಧಪಡಿಸುವುದು ಅನಿವಾರ್ಯವಾಯಿತು. ಅನುಕ್ರಮವಾಗಿ 730, 788, 1011, 1037 ಮತ್ತು 1306ರಲ್ಲಿ ಸೂಚಿಗಳು ಹೊರಬಂದುವು.						(ಬಿ.ಟಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ